Navaratri / Dasara / ನವರಾತ್ರಿ / ದಸರಾ ಹಬ್ಬ


ನವರಾತ್ರಿ / ದಸರಾ ಹಬ್ಬ ಕರ್ನಾಟಕದ ಒಂದು ಮುಖ್ಯ ಹಬ್ಬ. ಇದನ್ನು ಆಶ್ವಯುಜ ಮಾಸದ ಶುಕ್ಲ ಪಕ್ಷದಲ್ಲಿ ಪ್ರತಿಪದ್ (ಪಾಡ್ಯ) ಇಂದ ದಶಮಿವರಗೆ ಆಚರಿಸುತ್ತಾರೆ. ಇದನ್ನು ಶರದ್ ಋತುವಿನಲ್ಲಿ ಆಚರಿಸುವುದರಿಂದ ಶರನ್ನವರಾತ್ರಿಎಂದೂ ಕರೆಯುತ್ತಾರೆ. ಗೊಂಬೆಗಳನ್ನು ಅಲಂಕಾರ ಮಾಡಿ ಸಜ್ಜಾಗಿ ಜೋಡಿಸುತ್ತಾರೆ. ಆದ್ದರಿಂದ ಇದಕ್ಕೆ ಗೊಂಬೆ/ಬೊಂಬೆ ಹಬ್ಬ ಎಂದೂ ಹೆಸರಿದೆ. 

ನವರಾತ್ರಿ ಅಂದರೆ 9 ರಾತ್ರಿಗಳು. ಈ ಹತ್ತು ದಿನಗಳು ದೇವಿ/ಆದಿಶಕ್ತಿಯನ್ನು ದುರ್ಗಾ, ಸರಸ್ವತಿ, ಲಲಿತ, ಭವಾನಿ, ಲಕ್ಷ್ಮಿ, ಚಾಮುಂಡೇಶ್ವರಿ, ಚಂಡಿಕ, ಕಾಳಿ ಎಂದು ವಿವಿಧ ರೂಪದಲ್ಲಿ ಆರಾಧಿಸಿ ಪೂಜಿಸುತ್ತಾರೆ. ಇದರಲ್ಲಿ ವಿಶೇಷವಾದ ದಿನಗಳು: 
  • ಸರಸ್ವತಿ ಪೂಜೆ/ಹಬ್ಬ- ಮೂಲ ನಕ್ಷತ್ರದ ದಿನ ಸರಸ್ವತಿ ದೇವಿಗೆ ಪೂಜೆ.
  • ದುರ್ಗಾಷ್ಟಮಿ - ಅಷ್ಟಮಿ ದಿನ ದುರ್ಗಾ ದೇವಿಯ ಆರಾಧನೆ.
  • ಮಹಾನವಮಿ / ಆಯುಧ ಪೂಜೆ - ನವಮಿಯ ದಿನ ಆಯುಧಾಗಳಿಗೆಲ್ಲ ಪೂಜೆ ಮಾಡುತ್ತಾರೆ.
  • ವಿಜಯದಶಮಿ - ದಶಮಿಯ ದಿನ ದುಷ್ಟ ಶಕ್ತಿಯ ಮೇಲೆ ಶಿಷ್ಟ ಶಕ್ತಿಯ ವಿಜಯವನ್ನು ಆಚರಿಸುತ್ತಾರೆ.
ನವರಾತ್ರಿಯನ್ನು ಆಚರಿಸುವುದರ ಹಿಂದೆ ಹಲವು ಕಥೆಗಳಿವೆ.ನವರಾತ್ರಿಯಲ್ಲಿ ಚಾಮುಂಡೇಶ್ವರಿ /ದುರ್ಗದೇವಿಯು ಮಹಿಷಾಸುರ ಮರ್ಧಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು , ಶ್ರೀರಾಮನು ರಾವಣನನ್ನು ಸಂಹಾರ ಮಾಡಿದನು ಎಂದು ನಂಬಿಕೆ ಇದೆ. ಪಾಂಡವರು ಒಂದು ವರ್ಷ ಅಜ್ನಾತವಾಸ ಮಾಡುವಾಗ ತಮ್ಮ ಆಯುಧಗಳನ್ನು ಶಮೀ/ ಬನ್ನಿ ಮರದಲ್ಲಿ ಮುಚ್ಚಿಟ್ಟಿದ್ದರು. ದಶಮಿಯ ದಿನಕ್ಕೆ 1 ವರ್ಷ ಅಜ್ಞಾತವಾಸ ಮುಗಿದು, ಅವರು ಬನ್ನಿ ಮರದಿಂದ ತಮ್ಮ ಆಯುಧಗಳನ್ನು ವಾಪಸ್ಸು ಪಡೆದು ಕೌರವರನ್ನು ಯುದ್ಧದಲ್ಲಿ ಸೋಲಿಸಿದರು ಎಂದು ಹೇಳುತ್ತಾರೆ. ಹೀಗಾಗಿ ಈ ದಶಮಿಯನ್ನು ವಿಜಯದಶಮಿ ಎಂದು ಕರೆಯುತ್ತಾರೆ. ದಾನವ/ರಾಕ್ಷಸ/ದುಷ್ಟ ಶಕ್ತಿಯನ್ನುದೇವಿ/ಶಿಷ್ಟ ಶಕ್ತಿ ನಾಶಗೊಳಿಸಿ ವಿಜಯವಾದ ಸಂಕೇತವಾಗಿ ಈ ಹಬ್ಬವನ್ನು ಆಚರಿಸುತ್ತಾರೆ.

ಕನ್ನಡಿಗರಿಗೆ ದಸರಾ ಎಂದರೆ ಇನ್ನಷ್ಟು ಹೆಮ್ಮೆ, ಇದು ನಮ್ಮ ನಾಡಹಬ್ಬ.ಮೈಸೂರು ದಸರಾ ಎಷ್ಟೊಂದು ಸುಂದರಅಂತ ಹಾಡು ಇರುವಂತೆ ನಮ್ಮ ಮೈಸೂರಿನ ದಸರಾ ಹಬ್ಬದ ಆಚರಣೆ ಜಗತ್ತಿನಲ್ಲೇ ಪ್ರಸಿದ್ದ. ವೊಡೆಯರ ಮನೆತನ ರಾಜರು ದಸರಾ ಹಬ್ಬವನ್ನು ವಿಜ್ರಂಬಣೆ ಇಂದ ಆಚರಸುತ್ತ ಬಂದಿದ್ದಾರೆ. ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿಯ ಪೂಜೆಯಿಂದ ಪ್ರಾರಂಭ ಆಗುತ್ತೆ. ವಿಜಯದಶಮಿ ದಿನ ಚಾಮುಂಡಿ ದೇವಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಕೂರಿಸಿ ಆನೆಯ ಮೇಲೆ ಜಂಬೂ ಸವರಿ ಮಾಡುತ್ತಾರೆ. ದೊಡ್ಡ ಮೆರವಣಿಗೆ ಮಾಡಿ ಬನ್ನಿ ಮಂಟಪದಲ್ಲಿ ಬನ್ನಿ ಮರಕ್ಕೆ ಪೂಜೆ ಮಾಡಿ ಕೊನೆಗೊಳ್ಳುತ್ತದೆ. ಈ ಹತ್ತು ದಿನ ಅರಮನೆಗೆ ದೀಪದಿಂದ ಅಲಂಕಾರ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತೆ. ಒಟ್ಟಿನಲ್ಲಿ ಮೈಸೂರು ದಸರಾದ ವೈಭವ ನೋಡಿದವರಿಗೇ ನೋಡಿದವರಿಗೇ ಗೊತ್ತು:)
ಮೈಸೂರಿಗೆ ಹೋಗಿ ದಸರಾ ನೋಡುವ ಆಸೆ ಇದ್ದರೆ, Mysoredasara.org ಅಲ್ಲಿ ಹೆಚ್ಚಿನ ಮಾಹಿತಿ ಇದೆ.

ಪಾಡ್ಯದ ದಿನ ದೇವಿಯ ಪಟದ ಜೊತೆ ಪಟ್ಟದ ಗೊಂಬೆ ಹಾಗು ಇತರೆ ಗೊಂಬೆಗಳನ್ನು ಇಟ್ಟು ಪೂಜೆ ಮಾಡಬೇಕು. ಪ್ರತಿ ದಿನ ದೇವಿಯನ್ನು ಧ್ಯಾನ ಮಾಡಬೇಕು.
ಪೂಜೆ ಶುರು ಮಾಡುವ ಮುನ್ನ , ಅಲಂಕಾರ, ಅಣಿ ಮಾಡಿಕೊಳ್ಳಕ್ಕೆ ಸುಮಾರು ಹೊತ್ತು ಆಗುತ್ತೆ. ಪೂಜೆ ಅಂದರೆ ಎಷ್ಟೊಂದು ಸಾಮಗ್ರಿ ಉಪಯೋಗಿಸುತ್ತೀವಿ , ಪೂಜೆ ಮಾಡೋ ಸಡಗರದಲ್ಲಿ ಕೆಲವೊಮ್ಮೆ ಒಂದೆರಡು ಸಾಮಾನು ಮರೆಯುವ ಸಾಧ್ಯತೆಗಳು ಇದೆ :) ಹೀಗೆ ಆಗದೆ ಇರಲಿ ಅಂತ ಪೂಜಾ ಸಾಮಾನುಗಳ ಒಂದು ಪಟ್ಟಿಯನ್ನು ಮಾಡಿದ್ದೀನಿ.

ಸಾಮನ್ಯವಾಗಿ ಎಲ್ಲ ಪೂಜೆಗಳಿಗೂ ಉಪಯೋಗಿಸುವ ಸಾಮಗ್ರಿಗಳು:
  • ರಂಗೋಲಿಮಣೆ / ಮಂಟಪ
  • ದೇವರ ವಿಗ್ರಹ, ದೇವರ ಪಟ
  • ನಂದಾ ದೀಪ, ದೀಪದ ಕಂಭ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಹತ್ತಿ ಬತ್ತಿ
  • ಘಂಟೆ, ಪಂಚಪಾತ್ರೆ, ಉದ್ದರಣೆ, ಅರ್ಘ್ಯ ಪಾತ್ರೆ, ನೀರು
  • ಪೂಜಾ ವಿಧಾನ ಇರುವ ಪುಸ್ತಕ /ಕ್ಯಾಸೆಟ್ / ಸಿ.ಡಿ.
  • ಅರಿಶಿನ, ಕುಂಕುಮ, ಮಂತ್ರಾಕ್ಷತೆ
  • ಶ್ರೀಗಂಧ, ಊದಿನ ಕಡ್ಡಿ
  • ಹೂವು, ಪತ್ರೆ, ಗೆಜ್ಜೆ ವಸ್ತ್ರ
  • ಪಂಚಾಮೃತ - ಹಾಲು, ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪ
  • ವೀಳ್ಯದ ಎಲೆ, ಅಡಿಕೆ, ಹಣ್ಣು , ತೆಂಗಿನಕಾಯಿ
  • ನೈವೇದ್ಯ - ಪಾಯಸ, ಹುಗ್ಗಿ, ಅನ್ನ, ಕೋಸಂಬರಿ , ಇತ್ಯಾದಿ
  • ಹಲಗಾರತಿ, ಕರ್ಪೂರ, ಮಂಗಳಾರತಿ ಬತ್ತಿ
  • ಆರತಿ ತಟ್ಟೆ, ಸೊಡಲು, ಹೂಬತ್ತಿ,
ಕೆಲವು ಪೂಜೆಗಳಲ್ಲಿ ಅಧಿಕವಾಗಿ ಇನ್ನಷ್ಟು ಸಾಮಗ್ರಿಗಳನ್ನು ಉಪಯೋಗಿಸುತ್ತೀವಿ :
  • ಕಳಶ, ಅರಿಶಿನದ ಕೊನೆ, ಜನಿವಾರ, ಅರಿಶಿನ ದಾರ
  • ಮರದ ಜೊತೆ / ಬಾಗಿನ
  • ಬಳೆ, ಬಿಚ್ಚೋಲೆ, ಕನ್ನಡಿ, ಕಪ್ಪು, ರವಿಕೆ ಬಟ್ಟೆ
  • ಸೋಬಲಕ್ಕಿ, ಉಪಾಯನ ದಾನ
  • ನವಗ್ರಹ ಮಂಡಲ ......ಇತ್ಯಾದಿ
ಇವುಗಳೊಂದಿಗೆ ಇನ್ನು ಹಲವಾರು ವಸ್ತುಗಳ ಬಳಕೆ ಮಾಡಬಹುದು ಮುಖ್ಯವಾಗಿ ಅಲಂಕಾರ ಮಾಡುವುದಕ್ಕೆ. ಮಾರುಕಟ್ಟೆಯಲ್ಲಿ ಅನೇಕ ವಿಧವಾದ ಅಲಂಕಾರಿಕ ಸಾಮಾನು ದೊರೆಯುತ್ತದೆ . ಇದು ಪ್ರತಿಯೊಬ್ಬರ ಆಸಕ್ತಿ ಮತ್ತು ಅಭಿರುಚಿ ಮೇಲೆ ಅವಲಂಭಿಸಿದೆ.

Comments

Popular posts from this blog

ನಾಗ ಪಂಚಮಿ ಕಥೆ : ಪುರಾಣ : ನಾಗ ಪಂಚಮಿಯ ವೈಶಿಷ್ಟ್ಯ: ಉಪವಾಸದ ಮಹತ್ವ:ನಾಗನ ಮಹಾತ್ಮೆ:ಪೂಜೆ

ತುಳುವೆರೆನ ಪೊಸ ವರ್ಸ ಬತ್ತ್ಂಡ್ ಬಿಸು ಪರ್ಬ

ಮಾತಾ ತುಳುವ ಅಪ್ಪೆ ಜೊಕೂಲೆಗ್ "ಆಟಿ ಅಮಾವಾಸ್ಯೆ ದ ಶುಭಾಶಯಲೋ.."